ಎಡ್ಡಿಂಗ್‍ಟನ್, ಸರ್ ಆರ್ಥರ್ ಸ್ಟ್ಯಾನ್ಲೆ  
	1882-1944. ಬ್ರಿಟನ್ನಿನ ಖಗೋಳವಿಜ್ಞಾನಿ. ಜನನ ಇಂಗ್ಲೆಂಡಿನ ವೆಸ್ಟ್‍ಮೋರ್‍ಲ್ಯಾಂಡಿನ ಕೆಂಡ್ಲ್ ಎಂಬಲ್ಲಿ. ವಿದ್ಯಾಭ್ಯಾಸ ಮ್ಯಾಂಚೆಸ್ಟರಿನ ಓವೆನ್ಸ್ ಕಾಲೇಜು ಮತ್ತು ಕೇಂಬ್ರಿಜ್‍ನ ಟ್ರಿನಿಟಿ ಕಾಲೇಜುಗಳಲ್ಲಿ. ಟ್ರಿನಿಟಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಈತನಿಗೆ 1904ರಲ್ಲಿ ಪ್ರಥಮ ಶ್ರೇಣಿಯ ಪ್ರಥಮ ಸ್ಥಾನವೂ 1907ರಲ್ಲಿ ಸ್ಮಿತ್ ಬಹುಮಾನವೂ ದೊರೆತವು. ಅನಂತರ ಟ್ರಿನಿಟಿ ಕಾಲೇಜಿನ ಫೆಲೋ ಗೌರವ ಸಂದಿತು. ಗ್ರೀನಿಚ್ಚಿನ ರಾಯಲ್ ವೀಕ್ಷಣಾಲಯದಲ್ಲಿ ಮುಖ್ಯ ಸಹಾಯಕನಾಗಿ 1906-1913ರವರೆಗೆ ಕೆಲಸ ಮಾಡಿದ. 1913ರಲ್ಲಿ ಈತನನ್ನು ಕೇಂಬ್ರಿಜಿನ ಖಗೋಳಶಾಸ್ತ್ರ ಮತ್ತು ಪ್ರಾಯೋಗಿಕ ವಿಜ್ಞಾನ ವಿಭಾಗದ ಪ್ಲೂಮಿಯನ್ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆ ಮಾಡಲಾಯಿತು. 1914ರಲ್ಲಿ ಎಡ್ಡಿಂಗ್‍ಟನ್ ಕೇಂಬ್ರಿಜ್ ವಿಶ್ವವಿದ್ಯಾನಿಲಯದ ವೀಕ್ಷಣಾಲಯದ ನಿರ್ದೇಶಕನಾದ.

	ಈತ ಮೊದಮೊದಲು ಬರೆದ ಪ್ರಬಂಧಗಳಲ್ಲಿ ನಾಕ್ಷತ್ರಿಕ ಚಲನೆ ಮತ್ತು ವಿವರಣೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಪ್ರಸ್ತಾಪವಿದೆ. ಇವನ ಮೊದಲ ಪುಸ್ತಕ ಸ್ಟೆಲ್ಲಾರ್ ಮುವ್‍ಮೆಂಟ್ ಅಂಡ್ ದಿ ಸ್ಟ್ರಕ್ಚರ್ ಆಫ್ ದಿ ಯೂನಿವರ್ಸ್ ಎಂಬುದು ಪ್ರಕಟವಾದದ್ದು 1914ರಲ್ಲಿ. ಈ ಪುಸ್ತಕದಲ್ಲಿ ತಾರಾಪುಂಜಗಳ ಚಲನೆಗೆ ಸಂಬಂಧಿಸಿದಂತೆ ಇರುವ ಒಂದು ವ್ಶೆಜ್ಞಾನಿಕ ನಿರೂಪಣೆ ಪ್ರಾಯಶಃ ಈ ವಿಷಯಕ್ಕೆ ಇರುವಂಥ ವಿವರಣೆಗಳಲ್ಲೆಲ್ಲ ಅತ್ಯಂತ ಅಮೋಘವಾದುದು. ಪುಸ್ತಕದ ಕಡೆಯ ಅಧ್ಯಾಯ ಖಗೋಳಿಯ ಸಂಶೋಧನೆಯ ಅಡಿಗಲ್ಲಿನಂತಿದೆ. 1916ರಲ್ಲಿ ಈತ ನಕ್ಷತ್ರದ ಆಂತರಿಕ ರಚನೆಗೆ ಸಂಬಂಧಿಸಿದ ಮೂಲಭೂತ ಸಂಶೋಧನೆಗಳನ್ನು ಪ್ರಾರಂಭಿಸಿದ. ನಕ್ಷತ್ರಗಳ ಮೇಲ್ಮೈಗಳಿಂದ ಬೆಳಕಿನ ಮತ್ತು ಉಷ್ಣದ ರೂಪದಲ್ಲಿ ಹೊರಹೊಮ್ಮುವ ಶಕ್ತಿ ಒಳಗೆಲ್ಲ ವಿಸರಣರೂಪವಾಗೂ ಪ್ರಸಾರವಾಗುತ್ತದೆ ಎಂಬುದು ಈತನ ಆಧಾರ ಭಾವನೆಯಾಗಿತ್ತು. ಎಲ್ಲ ನಕ್ಷತ್ರಗಳೂ ಅನಿಲದಿಂದೊಡಗೂಡಿದುವೆಂದು ಈತ ತೀರ್ಮಾನಕ್ಕೆ ಬಂದ. ನಕ್ಷತ್ರದ ತೂಕ ಮತ್ತು ಬೆಳಕುಗಳ ನಡುವೆ ಒಂದು ಸಂಬಂಧವಿದೆ ಎಂಬುದನ್ನು ಕಂಡುಹಿಡಿದ. ಶ್ವೇತಕುಬ್ಜ ನಕ್ಷತ್ರಗಳ (ವ್ಹೈಟ್ ಡ್ವಾಫ್ರ್ಸ್) ಸಾಂದ್ರತೆ ಮತ್ತು ನಕ್ಷತ್ರಾಂತರ ಮಾಧ್ಯಮಗಳ ಬಗ್ಗೆ ಇವನ ಪುಸ್ತಕದಲ್ಲಿ ಹೆಚ್ಚು ವಿವರಣೆಗಳಿವೆ. ದಿ ಇಂಟರ್‍ನಲ್ ಕಾನ್ಸ್‍ಟಿಟ್ಯೂಷನ್ ಆಫ್ ದಿ ಸ್ಟಾರ್ಸ್ (1926) ಎಂಬ ಇವನ ಪುಸ್ತಕ ಖಗೋಳಶಾಸ್ತ್ರದ ಒಂದು ಶಾಸ್ತ್ರ ಗ್ರಂಥವಾಯಿತು. 1917ರಿಂದಾಚೆಗೆ ಈತನಿಗೆ ಐನ್‍ಸ್ಟೈನ್ ಪ್ರತಿಪಾದಿಸಿದ ರಿಲೆಟಿವಿಟಿ ಸಿದ್ಧಾಂತದ ಬಗ್ಗೆ ಆಸಕ್ತಿ ಹುಟ್ಟಿತು. 1919ರಲ್ಲಿ ಸಂಭವಿಸಿದ ಪೂರ್ಣ ಸೂರ್ಯಗ್ರಹಣವನ್ನು ವೀಕ್ಷಿಸಲು ಹೊರಟ ತಂಡದ ನಾಯಕನಾಗಿದ್ದ. ರಿಲೆಟಿವಿಟಿ ಸಿದ್ಧಾಂತ ಇಂಗ್ಲಿಷ್ ಪ್ರಪಂಚದಲ್ಲಿ ಹೆಚ್ಚು ವ್ಯಾಪಕವಾಗಲು ಈತನ ಸ್ಪೇಸ್, ಟೈಮ್ ಅಂಡ್ ಗ್ರ್ಯಾವಿಟೇಷನ್ (1920), ದಿ ಮ್ಯಾಥಮ್ಯಾಟಿಕಲ್ ಥಿಯೊರಿ ಆಫ್ ರಿಲೆಟಿವಿಟಿ (1923) ಎಂಬ ಪುಸ್ತಕಗಳು ಸಹಕಾರಿಯಾದವು. ಸಾಮಾನ್ಯೀಕೃತ ರಿಲೆಟಿವಿಟಿ ಸಿದ್ಧಾಂತ ಮತ್ತು ಶಕಲ ಸಿದ್ಧಾಂತಗಳನ್ನು ವಿಲೀನಗೊಳಿಸಲು ಈತ 1930ರ ಅನಂತರ ಕೆಲಸಮಾಡಿದ. ವೀಕ್ಷಣೆಯನ್ನು ಮಾಡದೆಯೇ ನಿಸರ್ಗದ ಸ್ಥಿರಾಂಕಗಳ (ಕಾನ್ಸ್‍ಟೆಂಟ್ಸ್ ಆಫ್ ನೇಚರ್) ಮೌಲ್ಯವನ್ನು ಗೊತ್ತುಮಾಡುವುದು ಗಣಿತಾತ್ಮಕವಾಗಿ ಸಾಧ್ಯವೆಂಬುದನ್ನು ಈತ ನಂಬಿದ್ದ. ತಾತ್ತ್ವಿಕ ವಿಜ್ಞಾನಕ್ಕೆ ಈತನಿಗಿದ್ದ ಆಸಕ್ತಿಯ ಫಲದಿಂದಾಗಿ ಈ ಭಾವನೆ ಉತ್ಪನ್ನವಾಗಿದ್ದರೂ ಇದಕ್ಕೆ ವ್ಯಾಪಕ ಮನ್ನಣೆ ದೊರೆಯಲಿಲ್ಲ. ಭೌತಶಾಸ್ತ್ರದ ಹೆಚ್ಚು ಭಾಗ ವೀಕ್ಷಣೆಯಿಂದ ದೊರೆತ ಅಂಕಿಅಂಶಗಳನ್ನು ಆಧರಿಸಿ ವಿಜ್ಞಾನಿ ಮಾಡುವ ಪ್ರತಿಪಾದನೆಯ ವಿಧಾನವನ್ನು ಪ್ರತಿಬಿಂಬಿಸುತ್ತದೆ ಎಂಬುದು ಎಡ್ಡಿಂಗ್‍ಟನ್ನನ ಅಭಿಪ್ರಾಯ. ಈ ದೃಷ್ಟಿ ರಿಲೆಟಿವಿಟಿ ಥಿಯೊರಿ ಆಫ್ ಪ್ರೋಟಾನ್ಸ್ ಅಂಡ್ ಎಲೆಕ್ಟ್ರಾನ್ಸ್ (1936). ದಿ ಕಾಂಬಿನೇಷನ್ ಆಫ್ ರಿಲೆಟಿವಿಟಿ ಥಿಯೊರಿ ಅಂಡ್ ಕ್ವಾಂಟಮ್ ಥಿಯೊರಿ (1943) ಮತ್ತು ಫಂಡಮೆಂಟಲ್ ಥಿಯೊರಿ (1946) (ಇವನ ಕಾಲಾನಂತರ ಸರ್ ಇ.ಟಿ. ವಿಟ್ಟೇಕರ್ ಎಂಬವ ಸಂಪಾದಿಸಿದ್ದು) ಎಂಬ ಪುಸ್ತಕಗಳಲ್ಲಿ ಗಣಿತಾತ್ಮಕವಾಗಿ ನಿರೂಪಿತವಾಗಿದೆ. ದಿ ನೇಚರ್ ಆಫ್ ದಿ ಫಿಸಿಕಲ್ ವಲ್ರ್ಡ್ (1918) ಮತ್ತು ದಿ ಫಿಲಾಸಫಿ ಆಫ್ ಫಿಸಿಕಲ್ ಸೈನ್ಸ್ (1939) - ಇವು ಎಡ್ಡಿಂಗ್‍ಟನ್ನನ ಮುಖ್ಯ ತಾತ್ತ್ವಿಕ ಬರಹಗಳು.

	ಆಧುನಿಕ ಖಗೋಳಶಾಸ್ತ್ರದ ಮೇಲೆ ಎಡ್ಡಿಂಗ್‍ಟನ್ ನಡೆಸಿರುವ ಅಧ್ಯಯನ ಸಂಶೋಧನೆಗಳು ಈತನಿಗೆ ವಿಶೇಷ ಖ್ಯಾತಿಯನ್ನು ತಂದಿವೆ. ಜನಸಾಮಾನ್ಯರಿಗೂ ತಿಳಿಯುವಂಥ ಈತನ ಭಾಷಾಶೈಲಿ ಈತನನ್ನು ಜನಪ್ರಿಯಗೊಳಿಸಿದೆ. ತನ್ನ ಜೀವಮಾನದಲ್ಲಿ ಈತ ಅನೇಕ ಗೌರವಗಳನ್ನು ಸಂಪಾದಿಸಿದ್ದಾನೆ. 1930ರಲ್ಲಿ ಈತನಿಗೆ ನೈಟ್ ಬ್ಯಾಚೆಲರ್ ಗೌರವವೂ 1938ರಲ್ಲಿ ಆರ್ಡರ್ ಆಫ್ ಮೆರಿಟ್ ಗೌರವವೂ ಸಂದುವು.											

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ